1865-1928. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜಸುಧಾರಕರು. ಇವರು 1865 ಜನವರಿ 28ರಂದು ಪಂಜಾಬಿನ ಫಿರೋಜ್‍ಪುರ ಜಿಲ್ಲೆಯ ಧುಡಿಕೆ ಎಂಬಲ್ಲಿ ಜನಿಸಿದರು. ತಂದೆ ಮುನ್ಷಿ ರಾಧಾಕೃಷ್ಣಆಜಾದ್, ತಾಯಿ ಗುಲಾಬ್‍ದೇವಿ. ಇವರು ಕಾನೂನು ಪದವಿ ಪಡೆದು ಹಿಸ್ಸಾರ್ ಮತ್ತು ಲಾಹೋರ್‍ನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಆರ್ಯ ಸಮಾಜದಿಂದ ಪ್ರಭಾವಿತರಾದ ಇವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಲಾಹೋರಿನ ಡಿ.ಎ.ವಿ.ಕಾಲೇಜಿನ ಸ್ಥಾಪನೆ ಯಲ್ಲಿ ಇವರು ಪ್ರಮುಖ ಪಾತ್ರವಹಿಸಿದರು. ಪಾಶ್ಚಾತ್ಯ ರಾಜಕೀಯ ತತ್ತ್ವಗಳು ಹಾಗೂ ಭಾರತದ ಪರಂಪರೆಯ ಇತಿಹಾಸದ ಬಗ್ಗೆ ಪಾಂಡಿತ್ಯ ಪಡೆದರು. 1888ರಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಶ್ರೀಕೃಷ್ಣ, ಶಿವಾಜಿ, ಸ್ವಾಮಿ ದಯಾನಂದ ಸರಸ್ವತಿ, ಜೋಸೆಫ್ ಮ್ಯಾಜಿನಿ ಮತ್ತು ಗಿಸೆಫ್ ಗ್ಯಾರಿಬಾಲ್ಡಿಯವರ ಜೀವನ ಚರಿತ್ರೆಗಳು ಇವರ ಜೀವನದ ಗತಿಯನ್ನೇ ಪರಿವರ್ತಿಸಿದುವು. ರಾಜಕೀಯದ ಜೊತೆಗೆ ಸಮಾಜಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡರು. 1907ರಲ್ಲಿ ಕಾಂಗ್ರೆಸ್ಸಿನ ಧೀಮಂತ ನಾಯಕರಾಗಿ ಜನಪ್ರಿಯತೆ ಗಳಿಸಿದರು. ಗೋಪಾಲಕೃಷ್ಣ ಗೋಖಲೆಯವರ ಜೊತೆ ಇಂಗ್ಲೆಂಡಿಗೆ ಭೇಟಿ ನೀಡಿ, ಆಂಗ್ಲ ಸರ್ಕಾರದ ದಬ್ಬಾಳಿಕೆಯ ಬಗ್ಗೆ ಇಂಗ್ಲೆಂಡಿನಲ್ಲಿ ಜನಾಭಿಪ್ರಾಯವನ್ನು ರೂಪಿಸಿದರು.

ಬಾಲಗಂಗಾಧರ ಟಿಳಕರು ಆರಂಭಿಸಿದ ಹೋಮ್‍ರೂಲ್ ಚಳವಳಿ ಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಟಿಳಕರೊಂದಿಗೆ ಇವರನ್ನು ಮಾಂಡಲೆ ಜೈಲಿಗೆ ಕಳುಹಿಸಲಾಯಿತು. ಇವರು ಜೈಲಿನಲ್ಲಿ `ಸ್ಟೋರಿ ಆಫ್ ಮೈ ಡೆಪೋರ್ಟೇಷನ್’ ಎಂಬ ಗ್ರಂಥ ಬರೆದರು. 1919ರಿಂದ 1920ರವರೆಗೆ ವಿದೇಶ ಪ್ರವಾಸ ಕೈಗೊಂಡರು. ಇವರು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಆರ್ಯ ಸಮಾಜ, ಯಂಗ್ ಇಂಡಿಯ, ಇಂಗ್ಲೆಂಡ್, ಅನ್‍ಹ್ಯಾಪಿ ಇಂಡಿಯ ಎಂಬ ಗ್ರಂಥಗಳನ್ನು ರಚಿಸಿದರು. 1920ರಲ್ಲಿ ಕಲ್ಕತ್ತದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ಸಿನ ವಿಶೇಷ ಅಧಿವೇಶನದ ಅಧ್ಯಕ್ಷರಾಗಿದ್ದರು. ಅಸಹಕಾರ ಚಳವಳಿಯಲ್ಲಿ ಇವರು ಬಹು ಮುಖ್ಯಪಾತ್ರ ವಹಿಸಿದ್ದರು. ಆದರೆ ಮಹಾತ್ಮಗಾಂಧಿಯವರು ಅಸಹಕಾರ ಚಳವಳಿ ಹಿಂತೆಗೆದುಕೊಂಡದ್ದನ್ನು ಟೀಕಿಸಿದರು. ಅನಂತರ ಇವರು ಮೋತಿಲಾಲ್‍ನೆಹರು ರೊಂದಿಗೆ ಸ್ವರಾಜ್ಯಪಕ್ಷವನ್ನು ಸ್ಥಾಪಿಸಿದರು. ಆದರೆ ಸ್ವಲ್ಪ ಅವಧಿಯಲ್ಲೇ ಸ್ವರಾಜ್ಯ ಪಕ್ಷದ ಕಾರ್ಯತಂತ್ರದಲ್ಲಿ ತಾತ್ತ್ವಿಕ ಭಿನ್ನಾಭಿಪ್ರಾಯ ತಲೆದೋರಿ, ಮದನ ಮೋಹನ ಮಾಳವೀ ಯರವರೊಂದಿಗೆ ಇಂಡಿಪೆಂಡೆಂಟ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಸ್ವಾತಂತ್ರ್ಯ ಚಳವಳಿಯ ಲಾಲ್-ಬಾಲ್-ಪಾಲ್ ಎಂದೇ ಪ್ರಸಿದ್ಧರಾಗಿದ್ದ. ಉಗ್ರಗಾಮಿ ನಾಯಕರಲ್ಲಿ ಇವರೂ ಒಬ್ಬರಾಗಿದ್ದರು. (ಲಾಲಾ ಲಜಪತ್ ರಾಯ್, ಬಾಲಗಂಗಾಧರ ಟಿಳಕ್, ಬಿಪಿನ್ ಚಂದ್‍ಪಾಲ್).

ಇವರು ಹಿಂದು ಮಹಾಸಭೆಯ ಅಧ್ಯಕ್ಷರಾಗಿದ್ದುದರಿಂದ ಇವರ ಮೇಲೆ ಮುಸ್ಲಿಂ ವಿರೋಧಿ ಎಂಬ ಆರೋಪ ಬಂದಿತು. ಇವರು ಹಿಂದು ಮುಸ್ಲಿಂ ಐಕ್ಯವನ್ನು ಪ್ರತಿಪಾದಿಸುವ ಅನೇಕ ಲೇಖನಗಳನ್ನು ಬರೆದರು. ಇವರು ಭಾರತದ ಕಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1920ರಲ್ಲಿ ನಡೆದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿದ್ದರು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮಹಾಧಿವೇಶನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಇವರು ಸರ್ವೆಂಟ್ಸ್ ಆಫ್ ಪೀಪಲ್ ಎಂಬ ಜನಸೇವಕ ಸಂಘ ಸ್ಥಾಪಿಸಿದ್ದರು. ಸಾಮಾಜಿಕ ಅನಿಷ್ಟಗಳಾದ ಮೂಢನಂಬಿಕೆ, ಕಂದಾಚಾರ ಹಾಗೂ ಅಸ್ಪøಶ್ಯತೆಯ ವಿರುದ್ಧ ತೀವ್ರ ಹೋರಾಟ ನಡೆಸಿದರು. ಸ್ವದೇಶಿ ತತ್ತ್ವದ ಪ್ರತಿಪಾದಕರಾದ ಇವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಲಕ್ಷ್ಮೀ ಇನ್ಷೂರೆನ್ಸ್ ಕಂಪನಿ ಗಳನ್ನು ಸ್ಥಾಪಿಸಿದರು. ಪತ್ರಿಕೋದ್ಯಮಿಯಾಗಿ ಇವರು ದಿ ಪಂಜಾಬ್, ದಿ ವಂದೇ ಮಾತರಂ ಮತ್ತು ದಿ ಪೀಪಲ್ ಎಂಬ ಸಾಪ್ತಾಹಿಕಗಳನ್ನು ಪ್ರಕಟಿಸುತ್ತಿದ್ದರು. ಇವರನ್ನು ಪಂಜಾಬಿನ ಸಿಂಹ, ಪಂಜಾಬಿನ ಕೇಸರಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. 1928 ಅಕ್ಟೋಬರ್ 20ರಂದು ಸೈಮನ್ ಆಯೋಗದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಇವರು ಪೊಲೀಸರ ಲಾಠಿ ಏಟಿನಿಂದ ತೀವ್ರವಾಗಿ ಗಾಯಗೊಂಡು 1928 ನವೆಂಬರ್ 17ರಂದು ನಿಧನಹೊಂದಿದರು. ಈ ಬಗ್ಗೆ ‘ಭಾರತದ ಸೌರವ್ಯೂಹದಿಂದ ಒಂದು ಮಹಾನ್ ತಾರೆ’ ಕಣ್ಮರೆಯಾಯಿತೆಂದು ಮಹಾತ್ಮ ಗಾಂಧೀಜಿಯವರು ಸಂತಾಪ ವ್ಯಕ್ತಪಡಿಸಿದ್ದರು.
(ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ